``ಕಿಣ್ವಗಳ ಬಳಕೆಯಿದಿಂದ ಹಿಟ್ಟು ಹುದುಗು ಬಂದು ದ್ವಿಗುಣ, ತ್ರಿಗುಣಗೊಳ್ಳುತ್ತದೆ. ಅದೇ ರೀತಿ ಇಂತಹ ಶಿಬಿರಗಳು ನಮ್ಮೊಳಗಿರುವ ಸುಪ್ತ ಪ್ರತಿಭೆಗಳನ್ನು ಬೆಳಗಲು ಸಹಕಾರಿ. ಆದರೆ ಹೊಸತನಕ್ಕೆ ತೆರೆದುಕೊಳ್ಳುವ ಹಾಗೂ ದೊರೆತ ಅವಕಾಶವನ್ನು ಸದುಪಯೋಗಪಡಿಸುವ ಮನಸ್ಸು ಇರಬೇಕು. ನಾನು ಕೂಡಾ ಇಂತಹ ಶಿಬಿರದಲ್ಲಿ ಭಾಗವಹಿಸಿದರಿಂದ ನನ್ನ ವಾಕ್ ಪ್ರತಿಭೆಗೆ ಪ್ರೋತ್ಸಾಹ ದೊರೆಯಿತು. ಈ ಶಿಬಿರಗಳನ್ನು ಆಯೋಜಿಸುತ್ತಾ ಮಾಂಡ್ ಸೊಭಾಣ್ ಕೊಂಕಣಿಯ ಉಳಿವಿಗೆ ಬಹು ದೊಡ್ಡ ಕೊಡುಗೆ ನೀಡಿದೆ'' ಎಂದು ಗಾಯಕಿ ಹಾಗೂ ಕಾರ್ಯನಿರ್ವಾಹಕಿ ಹೆರಾ ಪಿಂಟೊ ಹೇಳಿದರು.
ಅವರು 27-04-2019 ರಂದು ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ಆಯೋಜಿಸಿದ `ಖಮಿರ್' ಮಕ್ಕಳ ರಜಾ ಶಿಬಿರವನ್ನು ಹಿಟ್ಟಿಗೆ ಹುದುಗು ಕಿಣ್ವವನ್ನು ಬೆರೆಸಿ ಉದ್ಘಾಟಿಸಿದರು. ವಿವಿಧ ವಿಭಾಗಗಳ ತರಬೇತುದಾರರಾದ ರಾಹುಲ್ ಪಿಂಟೊ, ವೆಲನಿ ಗೋವಿಯಸ್, ಶ್ರವಣ್ ಬಾಳಿಗಾ, ಜೇಸನ್, ಡಿಯಾಲ್ ಆಶೆಲ್ ಡಿಸಿಲ್ವಾ ಹಾಗೂ ವಿಕ್ಟರ್ ಮತಾಯಸ್ ಇವರನ್ನು ಗೌರವಿಸಿದರು.
ಈ ಶಿಬಿರದಲ್ಲಿ ಮಕ್ಕಳಿಗೆ ಆಯ್ಕೆ ಮಾಡಿದ ತಲಾ ಗಾಯನ, ನೃತ್ಯ ಮತ್ತು ನಾಟಕ ವಿಭಾಗಗಳಲ್ಲಿ ಹಾಗೂ ಎಲ್ಲರಿಗೂ ಕೊಂಕಣಿ ಭಾಷೆಯಲ್ಲಿ ತರಬೇತಿ ದೊರೆಯಲಿದೆ. ಮೇ 05 ರಂದು ನಡೆಯುವ 209 ನೇ ತಿಂಗಳ ವೇದಿಕೆಯಲ್ಲಿ ಈ ಶಿಬಿರಾರ್ಥಿಗಳ ಪ್ರದರ್ಶನ ನಡೆಯಲಿದೆ.
ಮಾಂಡ್ ಸೊಭಾಣ್ 2002 ರಿಂದ ಈ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಮಂಗಳೂರು ಮಾತ್ರವಲ್ಲದೇ, ಚಿಕ್ಕಮಗಳೂರು ಹಾಗೂ ಮುಂಬಯಿಯಲ್ಲೂ ಶಿಬಿರಗಳು ನಡೆದಿವೆ.
ವೇದಿಕೆಯಲ್ಲಿ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಐರಿನ್ ರೆಬೆಲ್ಲೊ ನಿರೂಪಿಸಿ ವಂದಿಸಿದರು.
ಚಿತ್ರಕೃಪೆ : ರಾಹುಲ್ ಪಿಂಟೊ