ಸಾಂಪ್ರದಾಯಿಕ ಹಾಡುಗಳ ಸರ್ಟಿಫಿಕೆಟ್ ಕೋರ್ಸಿನ ಸಮಾರೋಪದಲ್ಲಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್ ಪಿ ನಾಯ್ಕ್
``ಕೊಂಕಣಿ ಹಾಡುಗಳ ತರಬೇತಿ ಬಗ್ಗೆ ಸರಕಾರ ನೀಡಿದ ಒಂದು ಸರ್ಟಿಫಿಕೆಟ್ ತನ್ನಲ್ಲಿ ಇದೆ ಎನ್ನುವುದೇ ಅಭಿಮಾನ ಪಡುವ ವಿಷಯ. ಜನರಿಗೆ ತಮ್ಮ ಸಾಂಪ್ರದಾಯಿಕ ಭಂಡಾರದ ಮೇಲೆ ಅಭಿಮಾನ ಮೂಡಿಸುವಂತಹ ಈ ರೀತಿಯ ತರಬೇತಿಯನ್ನು ರಾಜ್ಯದಾದ್ಯಂತ ವಿಸ್ತರಿಸಬೇಕು. ಇದಕ್ಕೆ ಅಕಾಡೆಮಿ ಬೇಕಾದ ನೆರವನ್ನು ನೀಡಲಿದೆ. ಹೊನ್ನಾವರದಲ್ಲಿ ಮುಂದಿನ ವಾರ ಸಾಂಪ್ರದಾಯಿಕ ಹಾಡುಗಳ ತರಬೇತಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್ ಪಿ ನಾಯ್ಕ್ ಹೇಳಿದರು. ಅವರು 14.7.19 ರಂದು ಶಕ್ತಿನಗರದ ಕಲಾಂಗಣದಲ್ಲಿ ಅಕಾಡೆಮಿ ಹಾಗೂ ಮಾಂಡ್ ಸೊಭಾಣ್ ಜಂಟಿ ಆಶ್ರಯದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಕೊಂಕಣಿ ಹಾಡುಗಳ ಸರ್ಟಿಫಿಕೆಟ್ ಕೋರ್ಸಿನ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಕಾರ್ಕಳ, ಮಂಜೇಶ್ವರ, ಬಂಟ್ವಾಳ, ಉಳ್ಳಾಲ, ಮಂಗಳೂರು ಇತ್ಯಾದಿ ತಾಲೂಕುಗಳಿಂದ ಆಸಕ್ತಿಯಿಂದ ಬಂದು ಕಲಿತ ತಾವುಗಳು ಇದನ್ನು ಬೇರೆಯವರಿಗೆ ಕಲಿಸಬೇಕು. ಆಗ ನಶಿಸುತ್ತಿರುವ ಪರಂಪರೆ ಬೆಳೆಯುತ್ತದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ನಿರ್ದೇಶಕ ಎರಿಕ್ ಒಝೇರಿಯೊ ಇವರ ಶ್ರಮ ಎದ್ದು ಕಾಣುತ್ತದೆ. ಅಕಾಡೆಮಿ ಕೊಂಕಣಿ ಜನರ ಸ್ವತ್ತು. ಇಂತಹ ವಿಭಿನ್ನಾಲೋಚನೆಗಳೊಡನೆ ಅಕಾಡೆಮಿಯನ್ನು ಸಂಪರ್ಕಿಸಿದರೆ ಖಂಡಿತಾ ಪ್ರೋತ್ಸಾಹ ನೀಡುತ್ತೇವೆ. ಈಗಾಗಲೇ ಅಕಾಡೆಮಿ ವತಿಯಿಂದ 41 ಕೊಂಕಣಿ ಸಮುದಾಯಗಳ ಆಹಾರೋಪಚಾರದ ಬಗ್ಗೆ ವಿಡಿಯೊ ದಾಖಲೀಕರಣ ಆರಂಭಿಸಲಾಗಿದೆ. ಊಟೋಪಚಾರದ ಜತೆಗೆ ಅದಕ್ಕೆ ಸಂಬಂಧಿಸಿದ ವೈವಿಧ್ಯಮಯ ಶಬ್ದ ಭಂಡಾರವನ್ನು ಜನರೆಡೆ ತಲುಪಿಸಲು ಇದು ಸಹಕಾರಿ ಎಂದು ತಿಳಿಸಿದರು.
ಮುಖ್ಯ ಅತಿಥಿ ಲಿಡ್ವಿನ್ ಕುಟಿನ್ಹಾ ದುಬಾಯಿ ಇವರು ಮಾಂಡ್ ಸೊಭಾಣ್ ತರಬೇತಿ ತನ್ನ ಕೊಂಕಣಿಯನ್ನು ಸುಂದರಗೊಳಿಸಿದೆ. ಹಾಗೂ ವಿದೇಶದಲ್ಲೂ ಕೊಂಕಣಿಗಾಗಿ ದುಡಿಯಲು ಪ್ರೇರೇಪಿಸಿದೆ. ನಿಮ್ಮ ಕಲಿಕೆಯು ಇತರರಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಶಿಬಿರ ನಿರ್ದೇಶಕ ಎರಿಕ್ ಒಝೇರಿಯೊ ಸರ್ಟಿಫಿಕೇಟ್ ಕೋರ್ಸ್ ನಡೆದು ಬಂದ ಬಗೆ ವಿವರಿಸಿ, ಏಳು ಭಾನುವಾರಗಳಲ್ಲಿ 40 ಹಾಡುಗಳನ್ನು ಕಲಿಸುವ ಬಗ್ಗೆ ಹೇಳಿದ್ದರೂ ಮಾಂಡೊ, ದುಲ್ಪದಾಂ, ದೆಕ್ಣಿ, ಗುಮಟೆ ಹಾಡುಗಳು, ವೊವಿಯೊ-ವೇರ್ಸ್ (ಸೋಭಾನೆ ಹಾಡುಗಳು), ಶಿಶು ಗೀತೆಗಳು, ಕ್ರಿಸ್ಮಸ್ ಹಾಡುಗಳು ಮತ್ತು ಹಿರಿಯ ಸಂಗೀತಗಾರರ ರಚನೆಗಳು ಹೀಗೆ ಒಟ್ಟು 91 ಹಾಡುಗಳನ್ನು ಕಲಿಸಲಾಗಿದೆ. ಮುಂದಿನ ವಾರ ಹೊನ್ನಾವರದಲ್ಲಿ ಹಾಗೂ ತದನಂತರ ಗುರುಪುರ ಕೈಕಂಬದಲ್ಲಿ ತಲಾ 8 ಗಂಟೆಗಳ ಕಾರ್ಯಾಗಾರದಲ್ಲಿ 31 ಹಾಡುಗಳನ್ನು ಕಲಿಸಲಾಗುವುದು. ಅದೇ ರೀತಿ ಆಗಸ್ಟ್ನಲ್ಲಿ ಜೆಪ್ಪುವಿನಲ್ಲಿ ಮದುವೆ ಸೊಭಾನೆ ಹಾಡುಗಳ ಕಾರ್ಯಾಗಾರ ನಡೆಯಲಿದೆ. ಇತರರು ತಮ್ಮೂರಿನಲ್ಲೂ ಇಂತಹ ಕಾರ್ಯಾಗಾರ ನಡೆಸಲು ಇಚ್ಛಿಸಿದರೆ ಅಕಾಡೆಮಿ ಅಥವಾ ಮಾಂಡ್ ಸೊಭಾಣ್ ಅನ್ನು ಸಂಪರ್ಕಿಸಲು ಕೋರಿದರು.
ಅನಿಲ್ ಡಿಕುನ್ಹಾ ಹಾಗೂ ಜಾಸ್ಮಿನ್ ಲೋಬೊ ತಮ್ಮ ಕೋರ್ಸಿನ ಅನುಭವವನ್ನು ಹಂಚಿಕೊಂಡರು. ಶ್ರೇಷ್ಟ ಶಿಬಿರಾರ್ಥಿಯಾಗಿ ಆಯ್ಕೆಯಾದ ಜಾಸ್ಮಿನ್ ಲೋಬೊ ಆಗ್ರಾರ್ ಇವರಿಗೆ ಡಾ ವಾರಿಜಾ ನಿರ್ಬೈಲ್ ಪ್ರಾಯೋಜಿಸಿದ ರೂ. 3000 ದೊರೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಜೊಯ್ಸ್ ಒಝೇರಿಯೊ, ಅನಿಲ್ ಪತ್ರಾವೊ, ಎಲ್ರೊನ್ ರೊಡ್ರಿಗಸ್ ಹಾಗೂ ಸಹಕರಿಸಿದ ಫ್ಲಾವಿಯಾ ರಾಡ್ರಿಗಸ್ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಅಕಾಡೆಮಿ ಸದಸ್ಯ ಸಂತೋಶ್ ಶೆಣೈ ಉಪಸ್ಥಿತರಿದ್ದರು. ಸುಮೇಳ್ ಸಂಯೋಜಕ ಸುನೀಲ್ ಮೊಂತೇರೊ ಧನ್ಯವಾದವನ್ನಿತ್ತರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.